ಮಕಾಲಿ ತಾಮಸ್ ಬ್ಯಾಬಿಂಗ್‍ಟನ್, ಲಾರ್ಡ್
	1800-1859. ಇಂಗ್ಲಿಷ್ ಚರಿತ್ರಕಾರ, ಪ್ರಬಂಧಕಾರ ಮತ್ತು ಕವಿ. ವೆಸ್ಟ್ ಇಂಡಿಯದ ವರ್ತಕನ ಮಗ. ಹುಟ್ಟಿದ್ದು ಲೀಸ್ಟರ್‍ಷೀರ್‍ನ ರೂತ್‍ಲೇಟೆಂಪಲ್‍ನಲ್ಲಿ, ವಿದ್ಯಾಭ್ಯಾಸ ಕೇಂಬ್ರಿಜ್‍ನಲ್ಲಿ. ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಾಚೀನ ಸಾಹಿತ್ಯದಲ್ಲಿಯ ವಿದ್ವತ್ತಿಗೂ ವಾಗ್ಮಿತೆಗೂ ಹೆಸರಾಗಿದ್ದ. ನ್ಯಾಯಶಾಸ್ತ್ರ ಅಭ್ಯಾಸಮಾಡಿ ವಕೀಲನಾದರೂ ಸಾಹಿತ್ಯ ಈತನ ಮನವನ್ನು ಸೆಳೆಯಿತು. ಎಡಿನ್‍ಬರೋ ರಿವ್ಯೂದಲ್ಲಿ ಮಿಲ್ಟನ್‍ನನ್ನು ಕುರಿತು ಈತ ಬರೆದ ಲೇಖನ ಈತನಿಗೆ ಅಸಾಧಾರಣ ಕೀರ್ತಿಯನ್ನು ತಂದಿತು. ವಿಗ್ ಪಕ್ಷದ ಕೃಪೆಯನ್ನೂ ಒದಗಿಸಿಕೊಟ್ಟಿತು. ಮಕಾಲಿ ಹಲವು ವರ್ಷಗಳ ಕಾಲ ಪಾರ್ಲಿಮೆಂಟಿನ ಸದಸ್ಯನಾಗಿದ್ದ. ಭಾರತದ ಆಡಳಿತದಲ್ಲಿ ವಿಶೇಷ ಆಸಕ್ತಿ ವಹಿಸಿ, ಭಾರತದ ಅತ್ಯುಚ್ಚ ಸಮಿತಿ ಎನಿಸಿದ ಸುಪ್ರೀಮ್ ಕೌನ್ಸಿಲ್ ಆಫ್ ಇಂಡಿಯದ ಸದಸ್ಯನಾಗಿ 1834 ರಿಂದ ನಾಲ್ಕು ವರ್ಷಗಳ ಕಾಲ ಭಾರತದಲ್ಲಿದ್ದ. ಭಾರತದ ದಂಡನ್ಯಾಯಶಾಸ್ತ್ರವನ್ನು (ಕ್ರಿಮಿನಲ್ ಲಾ) ಕ್ರೋಡೀಕರಿಸಿದುದೂ ಪೌರಸ್ತ್ಯ ಶಿಕ್ಷಣಪದ್ದತಿಯನ್ನು ತಿರಸ್ಕರಿಸಿ ಭಾರತದಲ್ಲಿ ಇಂಗ್ಲಿಷ್ ಮಾದರಿಯ ಶಿಕ್ಷಣ ಪದ್ಧತಿಯನ್ನು ನೆಲೆಗೊಳಿಸಿದುದೂ ಇವನ ಸಾಧನೆಗಳು. 1857ರಲ್ಲಿ ಈತನನ್ನು ಶ್ರೀಮಂತ ವರ್ಗಕ್ಕೇರಿಸಲಾಯಿತು. ಈತ ವಿವಾಹ ಮಾಡಿಕೊಳ್ಳಲಿಲ್ಲ. 

	ಮಕಾಲಿ ತನ್ನ ಕಾಲದಲ್ಲಿಯೇ ಯಶಸ್ಸನ್ನು ಸಂಪಾದಿಸಿದ. ಸಾರ್ವಜನಿಕ ಜೀವನದಲ್ಲಿ ಕಷ್ಟಪಟ್ಟು ಕೆಲಸಮಾಡುವ ಸ್ವಭಾವ, ಪ್ರಾಮಾಣಿಕತೆ ಮತ್ತು ಸೇವಾಕಾಂಕ್ಷೆಗಳಿಂದ ಮನ್ನಣೆ ಪಡೆದ. ಅದ್ಭುತವಾದ e್ಞÁಪಕಶಕ್ತಿ, ಅಸಾಧಾರಣ ವಿಷಯ ಪರಿಚಯ, ಪರಿಣಾಮಕಾರಿಯಾದ ಭಾಷೆ, ಸಂಭಾಷಣೆಯ ಕೌಶಲ್ಯ-ಇವುಗಳಿಂದ ಪಾರ್ಲಿಮೆಂಟಿನಲ್ಲಿಯೂ ನಿತ್ಯಜೀವನದಲ್ಲಿಯೂ ಮೆಚ್ಚುಗೆ ಗಳಿಸಿದ.

	ಇಂಗ್ಲಿಷ್ ಸಾಹಿತ್ಯಕ್ಕೆ ಮಕಾಲಿಯ ಮುಖ್ಯ ಕಾಣಿಕೆ ಇಂಗ್ಲೆಂಡಿನ ಚರಿತ್ರೆ. ಈ ಕೃತಿ ಮತ್ತು ಸಾಹಿತ್ಯ ವಿಮರ್ಶೆಯಲ್ಲದೆ ಮಕಾಲಿ ರಚಿಸಿದ ಕೆಲವು ಪ್ರಬಂಧಗಳೂ ಗಮನಾರ್ಹವಾದವು; ಇಂದಿಗೂ ಓದಲರ್ಹವಾದವು. ಇವನ ಪ್ರಬಂಧಗಳಲ್ಲಿ ಗಹನತೆ ಇಲ್ಲ ಎನ್ನುವುದು ನಿಜ. ಚಾರಿತ್ರಿಕ ಪ್ರಬಂಧಗಳಲ್ಲಿ ಇವನ ವೈಯಕ್ತಿಕ ಅಭಿಪ್ರಾಯಗಳ ಛಾಯೆ ಪ್ರಬಲವಾಗಿದೆ ಎನ್ನವುದು ನಿಜ. ಆದರೆ ಕಣ್ಣಿಗೆ ಕಟ್ಟುವಂಥ ನಿರೂಪಣೆ, ಕೆಲವು ಪದಗಳಲ್ಲಿ ಪಾತ್ರಗಳನ್ನು ನಿರೂಪಿಸುವ ಕೌಶಲ್ಯ, ಭಾಷೆಯ ಸೊಗಸು, ವೈಭವ ಇವನ್ನು ಕಡೆಗಣಿಸುವಂತಿಲ್ಲ. 1774ರಿಂದ 1785ರ ತನಕ ಇಂಡಿಯದಲ್ಲಿ ಗೌರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್ ಇಂಗ್ಲೆಂಡಿಗೆ ಹಿಂದಿರುಗಿದ ಮೇಲೆ ಇಂಡಿಯದಲ್ಲಿ ಆತ ನಡೆಸಿದ ಅನ್ಯಾಯ ಅಪರಾಧಗಳಿಗಾಗಿ ಆತನನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ವಿಚಾರಣೆಯನ್ನು ವರ್ಣಿಸುವ ಮಕಾಲಿಯ ಬರೆಹ ಅದ್ಭುತವಾದ ಗದ್ಯಕೃತಿ. ಸನ್ನಿವೇಶದ ಮಹತ್ತ್ವ ಈ ಪ್ರಸಂಗದಲ್ಲಿ ಪಾತ್ರವಹಿಸಿದ ಪ್ರಮುಖ ವ್ಯಕ್ತಿಗಳ ಗುಣದೋಷಗಳು, ಅಪರಾಧಿಯ ಗಾಂಭೀರ್ಯ, ಬರ್ಕ್‍ನ ವಾಗ್ವೈಭವ, ಶ್ರೋತೃಗಳ ಮೇಲೆ ಅದರಿಂದಾದ ಪರಿಣಾಮ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಅಲಂಕೃತ ಶೈಲಿಯಲ್ಲಿ ನಿರೂಪಿಸಿದ್ದಾನೆ.

	ಮಕಾಲಿಯ ಪ್ರಸಿದ್ಧಕೃತಿ ಇಂಗ್ಲೆಂಡಿನ ಚರಿತ್ರೆ. ಐದು ಸಂಪುಟಗಳಲ್ಲಿ ಪ್ರಕಟವಾಗಿದೆ (1848-61). ನಾಲ್ಕು ಸಂಪುಟಗಳು ಈತನ ಜೀವಿತಕಾಲದಲ್ಲಿಯೂ ಐದನೆಯದು ಇವನ ನಿಧನಾನಂತರವೂ ಪ್ರಕಟವಾಯಿತು.

	ಎರಡನೆಯ ಜೇಮ್ಸ್‍ನ ಕಾಲದಿಂದ ವಾಲ್‍ಪೋಲ್‍ನ ಕಾಲದ ತನಕದ ಇಂಗ್ಲೆಂಡಿನ ಚರಿತ್ರೆಯನ್ನು ನಿರೂಪಿಸುವುದು ಮಕಾಲಿಯ ಉದ್ದೇಶವಾಗಿತ್ತು. ಆದರೆ ಈಗಿರುವಂತೆ ಮೂರನೆಯ ವಿಲಿಯಮ್‍ನ ಕಾಲಕ್ಕೆ ಕೃತಿ ಮುಕ್ತಾಯವಾಗುತ್ತದೆ. ಮಕಾಲಿ ಪ್ರಯತ್ನಿಸಿದ ಕಾರ್ಯ ಅಸಾಧಾರಣವಾದುದು. ವಿಪುಲವಾದ ಸಂಶೋಧನೆ, ಸಾಮ್ರಗಿಯ ಅಧ್ಯಯನ-ತುಲನೆ, ಆಯ್ಕೆ, ಯೋಜನೆ ಇವು ಈ ಕಾರ್ಯಕ್ಕೆ ಅಗತ್ಯವಾಗಿದ್ದುವು. ಮಕಾಲಿಯ ಅಸಾಧಾರಣ e್ಞÁಪಕ ಶಕ್ತಿ, ಚರಿತ್ರೆಯಲ್ಲದೆ ಇತರ ವಿಷಯಗಳ ಪರಿe್ಞÁನ ಮತ್ತು ನಿರೂಪಣೆಯ ಕೌಶಲ್ಯ ಈ ಕಾರ್ಯಕ್ಕೆ ಅವನನ್ನು ಅರ್ಹನನ್ನಾಗಿ ಮಾಡಿದುವು. ಈ ಕೃತಿ ದೇಶದ ಚರಿತ್ರೆಯನ್ನು ಮಾತ್ರ ನಮ್ಮ ಮುಂದಿಡುವುದಿಲ್ಲ. ಬೇರೆ ಬೇರೆ ಯುಗಗಳಲ್ಲಿ ಜನತೆಯ ಜೀವನ ವಿಧಾನ ವೈಖರಿಗಳನ್ನು ಚಿತ್ರಿಸುತ್ತದೆ. ಮಹತ್ತ್ವದ ಘಟನೆಗಳು ನಮ್ಮ ಕಣ್ಣ ಮುಂದೆ ಜರಗಿದಂತೆ ಭಾಸವಾಗುತ್ತವೆ. ಮುಖ್ಯ ವ್ಯಕ್ತಿಗಳು ರಕ್ತಮಾಂಸ ತುಂಬಿದ ಜೀವಂತ ಮಾನವರಾಗುತ್ತಾರೆ. ಪಾತ್ರ ಚಿತ್ರಣದಲ್ಲಿ ಮಕಾಲಿಯನ್ನು ಮೀರಿಸಿದ ಚರಿತ್ರಕಾರರಿಲ್ಲ. ಈತನ ಕೃತಿಯಲ್ಲಿ ನಿಷ್ಪಕ್ಷಪಾತ ದೃಷ್ಟಿಯಲ್ಲ. ಚರಿತ್ರಕಾರನ ವಿಗ್ ಪಕ್ಷಪಾತ ದೃಷ್ಟಿ ನಿರೂಪಣೆಯ ಮೇಲೆ ಪ್ರಭಾವ ಬೀರುತ್ತದೆ. ಕೃತಿಯಲ್ಲಿ ಗಹನತೆ ಇಲ್ಲ ಎನ್ನುವ ಆಕ್ಷೇಪಣೆಗಳು ಸತ್ಯವಾದುವು. ಆದರೆ ನಿರೂಪಣೆಯ ಸೊಗಸು, ಚಿತ್ರಗಳ ವೈಪುಲ್ಯ, ಭಾಷೆಯ ಭವ್ಯತೆ-ಇವು ಈ ಕೃತಿಯನ್ನು ಗಿಬನ್‍ನ ಮಹಾಕೃತಿಯ ಪಂಕ್ತಿಗೆ ಸೇರಿಸುತ್ತವೆ.
(ಎಲ್.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ